ಕಡೆಂಗೋಡ್ಲು ಶಂಕರಭಟ್ಟ : 1904-68. ಕವಿ, ಕತೆಗಾರ ಮತ್ತು ಪತ್ರಿಕೋದ್ಯಮಿ. ಮಂಗಳೂರು ಬಳಿಯ ಪೆರುವಾಯಿಯಲ್ಲಿ 1904 ಆಗಸ್ಟ್‌ 9ರಂದು ಜನಿಸಿದರು. ತಂದೆ ಈಶ್ವರ ಭಟ್ಟ. ಹುಟ್ಟೂರಿನಲ್ಲಿ ಆರಂಭದ ಶಿಕ್ಷಣವನ್ನು ಮುಗಿಸಿ, ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ, ಅಸಹಕಾರ ಚಳವಳಿಯ ಪ್ರಭಾವಕ್ಕೆ ಒಳಗಾಗಿ ಮಧ್ಯದಲ್ಲಿಯೇ ಶಾಲೆ ಬಿಟ್ಟರು. ಖಾದಿ ತೊಟ್ಟು ಸ್ವದೇಶಿ ವ್ರತಗಳನ್ನು ಕೈಗೊಂಡು ಮಂಗಳೂರಿನ ತಿಲಕ ವಿದ್ಯಾಲಯದಲ್ಲಿ ಸ್ವಲ್ಪ ಕಾಲ ಉಪಾಧ್ಯಾಯರಾಗಿದ್ದರು. ಇದೇ ಅವದಿsಯಲ್ಲಿ ಖಾಸಗಿಯಾಗಿ ವ್ಯಾಸಂಗ ಮಾಡಿ ಮದರಾಸು ವಿಶ್ವವಿದ್ಯಾಲಯದ ಪರೀಕ್ಷೆಗೆ ಕುಳಿತು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. 1927ರಲ್ಲಿ ಮಂಗಳೂರಿನ ಸೇಂಟ್ ಆಗ್ನೀಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿ 1964ರ ಆಗಸ್ಟ್‌ನಲ್ಲಿ ಆ ಹೂದ್ದೆಯಿಂದ ನಿವೃತ್ತರಾದರು. ಪತ್ರಿಕಾ ಕ್ಷೇತ್ರದಲ್ಲಿ ಶಂಕರ ಭಟ್ಟರ ಸೇವೆ ಗಮನಾರ್ಹ. ನವಯುಗ ಪತ್ರಿಕಾಲಯದಲ್ಲಿ ಸ್ವಲ್ಪಕಾಲ ಕೆಲಸ ಮಾಡಿದರು. 1928-53ರ ವರೆಗೆ ರಾಷ್ಟ್ರ ಬಂಧು ಪತ್ರಿಕೆಗೆ ಸಂಪಾದಕರಾಗಿದ್ದರು. ರಾಷ್ಟ್ರಮತದ ಸಂಪಾದಕರಾಗಿ ಕೊನೆಯವರೆಗೂ ದುಡಿದರು. ಮುಳಿಯ ತಿಮ್ಮಪ್ಪಯ್ಯನವರು ಶಂಕರ ಭಟ್ಟರ ಸಮೀಪದ ಬಂಧುಗಳು. ಪಂಜೆಮಂಗೇಶರಾಯರಿಂದ ಇವರು ಪ್ರಭಾವಿತರಾಗಿದ್ದರು.

ಶಂಕರಭಟ್ಟರಿಗೆ ಕನ್ನಡದ ಜೊತೆಗೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಅರಿವಿತ್ತು. ಇವರು 1927ರಲ್ಲಿ ಕಾಣಿಕೆ ಎಂಬ ಕವನ ಸಂಗ್ರಹವನ್ನು ಪ್ರಕಟಿಸಿದರು. ಅದು ವಿದ್ವಾಂಸರ ಮನ್ನಣೆಯನ್ನು ಗಳಿಸಿತು. ಅನಂತರ ನಲ್ಮೆ ಎಂಬ ಕವನ ಸಂಗ್ರಹವನ್ನು ಪ್ರಕಟಿಸಿದರು (1932). ಹೊನ್ನಿಯ ಮದುವೆ, ಮಾದ್ರಿಯ ಚಿತೆ ಮತ್ತು ಮುರಲೀನಾದ ಎಂಬ ಮೂರು ಪದ್ಯಗಳಿರುವ ಈ ಸಂಕಲನ ಶಂಕರಭಟ್ಟರಿಗೆ ಕನ್ನಡ ಕಾವ್ಯಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು. ಅದೇ ವರ್ಷ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿ ಗೋಷ್ಠಿಗೆ ಇವರು ಅಧ್ಯಕ್ಷರಾಗಿದ್ದರು. ಹಣ್ಣು, ಕಾಯಿ, ಘೂೕಷಯಾತ್ರೆ ಇವು ಇವರ ಇತರ ಕವನ ಸಂಗ್ರಹಗಳು, ಘೂೕಷಯಾತ್ರೆ ರಾಜದ್ರೋಹ ಪುರಿತವಾದುದೆಂದು ಅಂದಿನ ಸರ್ಕಾರ ಬಹಿಷ್ಕರಿಸಿತ್ತು. ಷಟ್ಪದಿ ಮತ್ತು ಚೌಪದಿಗಳಲ್ಲೂ ಇವರ ಕಾವ್ಯರಚನೆ ನಡೆದಿದೆ. ಧೂಮಕೇತು, ದೇವತಾ ಮನುಷ್ಯ ಮತ್ತು ಲೋಹದ ಕಣ್ಣು ಇವು ಇವರ ಕಾದಂಬರಿಗಳು, ಗುರುದಕ್ಷಿಣೆ, ಹಿಡಿಂಬೆ ಎಂಬ ಎರಡು ನಾಟಕಗಳನ್ನೂ ಗಾಜಿನ ಬಳೆ, ದುಡಿಯುವ ಮಕ್ಕಳು ಎಂಬ ಎರಡು ಕಥಾಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಸ್ವರಾಜ್ಯ ಯುದ್ಧ ಎಂಬುದು ಇವರ ಒಂದು ಅನುವಾದ ಕೃತಿ. ವಾಙ್ಮಯ ತಪಸ್ಸು ಇವರ ಹಲವು ಲೇಖನಗಳ ಸಂಗ್ರಹ. ಸುಸಂಸ್ಕೃತ ಪ್ರೌಢಶೈಲಿ ಇವರ ಕೃತಿಗಳಲ್ಲಿ ಎದ್ದು ಕಾಣುವ ಲಕ್ಷಣ.

ಶಂಕರಭಟ್ಟರು 1930ರಲ್ಲಿ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೂ 1955ರಲ್ಲಿ ಕಾರವಾರದಲ್ಲಿ ನಡೆದ 45ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಅಧ್ಯಕ್ಷರಾಗಿದ್ದರು. ಕಡೆಂಗೋಡ್ಲು ಶಂಕರಭಟ್ಟರ ಕಾವ್ಯ, ಕಾದಂಬರಿ, ನಾಟಕ, ಸಣ್ಣಕಥೆ ಮತ್ತು ಗದ್ಯ, ಪ್ರಬಂಧಗಳನ್ನು ಕಡೆಂಗೋಡ್ಲು ಸಮಗ್ರವಾಙ್ಮಯ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ.  	(ಟಿ.ಜಿ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ